ಕಾವ್ಯಪ್ರಭೇದಗಳು

ಸಂಸ್ಕøತದಲ್ಲಿ ಕಾವ್ಯಗಳ ವರ್ಗೀಕರಣ ಕ್ರಮ ಬಹು ಹಿಂದಿನಿಂದ ರೂಢಿಯಲ್ಲಿದೆಯಾದರೂ ಅದು ಯಾವಾಗ ಪ್ರಾರಂಭವಾಗಿರಬಹುದೆಂದು ನಿರ್ಧರಿಸಲು ಆಧಾರ ಸಾಲದು. ಭರತನ ನಾಟ್ಯಶಾಸ್ತ್ರದಲ್ಲಿ (ಸು. ಕ್ರಿ.ಪೂ. 2ನೆಯ ಶತಮಾನದಿಂದ ಕ್ರಿ.ಶ. 2ನೆಯ ಶತಮಾನ) ಕಾವ್ಯಪರೀಕ್ಷೆಯ ಅಂಶಗಳು ನಾಟ್ಯ ಶಾಸ್ತ್ರದ ಅಂಗವಾಗಿ ಪಾಠ್ಯ ಅಥವಾ ವಾಚಿಕಾಭಿನಯದ ಪ್ರಕರಣದಲ್ಲಿ ಪ್ರಸಕ್ತವಾಗಿ ಸಂಸ್ಕøತ, ಪ್ರಾಕೃತ ಎಂಬ ಎರಡು ಪ್ರಾಕಾರಗಳೂ ಮಾತ್ರ ಉಕ್ತವಾಗಿವೆ. ರೂಪಕದ ಹತ್ತು ಪ್ರಕಾರಗಳು ಲಕ್ಷಣೋದಾಹರಣೆಗಳ ಸಹಿತ ವಿಸ್ತಾರವಾಗಿ ವಿವೇಚಿಸಲ್ಪಟ್ಟಿವೆಯಾದರೂ ಕಾವ್ಯ ಸಾಮಾನ್ಯದ ವರ್ಗೀಕರಣ ಮಾತ್ರ ಸ್ಪಷ್ಟವಾಗಿ ಕಂಡುಬರುವುದಿಲ್ಲ.

ಕಾವ್ಯಲಕ್ಷಣವನ್ನು ನಿರೂಪಿಸುವ ಪ್ರಯತ್ನ ಬೆಳೆದಂತೆಲ್ಲ ಕಾಲಕಾಲಕ್ಕೆ ವಿಭಾಗ ಕ್ರಮದಲ್ಲಿಯೂ ಬದಲಾವಣೆಯಾಗಿರುವುದು ಕಂಡುಬರುತ್ತದೆ. ಅಲಂಕಾರ ಶಾಸ್ತ್ರದ ಪ್ರಥಮ ಗ್ರಂಥಕಾರನೆಂದು ಭಾವಿಸಲಾಗಿರುವ ಭಾಮಹ (ಸು. ಕ್ರಿ.ಶ. 6ನೆಯ ಶತಮಾನ) ತನ್ನ ಕಾವ್ಯಾಲಂಕಾರದಲ್ಲಿ ನಾಲ್ಕೈದು ವಿಭಾಗ ವಿಧಾನಗಳನ್ನು ತಿಳಿಸುವುದರಿಂದ ಇವನ ಕಾಲಕ್ಕಾಗಲೇ ಈ ದಿಕ್ಕಿನಲ್ಲಿ ಹಲವಾರು ಪ್ರಯತ್ನಗಳು ನಡೆದಿದ್ದಿರಬೇಕೆಂದು ಊಹಿಸಬಹುದು. ಶಬ್ದಾರ್ಥೌ ಸಹಿತೌ ಕಾವ್ಯಂ ಗದ್ಯಂ ಪದ್ಯಂ ಚ ತದ್ವಿಧಾ ಎಂಬಲ್ಲಿ ಕಾವ್ಯವನ್ನು ಗದ್ಯ, ಪದ್ಯ ಎಂದು ಎರಡಾಗಿ ವಿಂಗಡಿಸಿದೆ. ಅದೇ ಶ್ಲೋಕದ ಉತ್ತರಾರ್ಧದಲ್ಲಿ ಭಾಷೆಯ ದೃಷ್ಟಿಯಿಂದ ಕಾವ್ಯವನ್ನು ಸಂಸ್ಕøತ, ಪ್ರಾಕೃತ, ಅಪಭ್ರಂಶ ಎಂದು ಮೂರು ವಿಧವಾಗಿಯೂ ವಿಭಾಗಿಸಿದೆ. ಮುಂದೆ ಅದೇ ಗ್ರಂಥದಲ್ಲಿ ವಿಷಯದ ದೃಷ್ಟಿಯಿಂದ ವೃತ್ತಶಂಸಿ (ಹಿಂದೆ ನಡೆದದ್ದನ್ನು ತಿಳಿಸುವುದು), ದೇವಾದಿಚರಿತಶಂಸಿ (ದೇವತಾದಿಗಳ ಸಾಹಸವನ್ನು ತಿಳಿಸುವುದು), ಉತ್ಪಾದ್ಯವಸ್ತು (ಕಲ್ಪಿತವಾದ ವಸ್ತುವನ್ನುಳ್ಳದ್ದು), ಮತ್ತು ಕಲಾಶಾಸ್ತ್ರಾಶ್ರಯ (ಕಲೆ ಮತ್ತು ಶಾಸ್ತ್ರಗಳ ಆಧಾರದ ಮೇಲೆ ರಚಿತವಾದದ್ದು) ಎಂಬುದಾಗಿ ನಾಲ್ಕು ವಿಧವಾದ ವಿಂಗಡಿಸಲಾಗಿದೆ. ಪುನಃ ಕಾವ್ಯದ ಪ್ರಕಾರಕ್ಕನುಗುಣವಾಗಿ ಸರ್ಗಬಂಧ, ಅಭಿನೇಯಾರ್ಥ, ಆಖ್ಯಾಯಿಕಾ, ಕಥಾ, ಅನಿಬದ್ಧ ಎಂದು ಐದು ವಿಧವೆಂಬ ವಿಭಾಗಕ್ರಮವೂ ಕಂಡುಬರುತ್ತದೆ. ಕಾವ್ಯ ಭರತನ ದೃಷ್ಟಿಯಲ್ಲಿ ರೂಪಕದ ಅಂಗವಾದರೆ ಅಲಂಕಾರಿಕನಾದ ಭಾಮಹನ ದೃಷ್ಟಿಯಲ್ಲಿ ಅಭಿನಯಕ್ಕೆ ಯೋಗ್ಯವಾದ ನಾಟಕಾದಿಗಳು ಕಾವ್ಯಪ್ರಪಂಚದಲ್ಲಿ ಅಂತರ್ಭಾವ ಹೊಂದುತ್ತವೆ. ಆದರೂ ಅಭಿನೇಯಾರ್ಥವನ್ನು ನಾಟಕ, ದ್ವಿಪದೀ, ಶಮ್ಯಾ, ರಾಸಕ, ಸ್ಕಂಧಕ ಎಂದು ಐದು ವಿಧವಾಗಿ ವಿಂಗಡಿಸಿ ಅವುಗಳ ವಿವರಗಳು ಅನ್ಯರಿಂದ ಹೇಳಲ್ಪಟ್ಟಿವೆಯೆಂದು ತಿಳಿಸಿ ಭಾಮಹ ವಿರಮಿಸುತ್ತಾನೆ. ಸರ್ಗಬಂಧ (ಮಹಾಕಾವ್ಯ), ಕಥಾ, ಆಖ್ಯಾಯಿಕೆಗಳ ಲಕ್ಷಣವನ್ನು ತಿಳಿಸಿ ಅನಿಬದ್ಧಕಾವ್ಯಗಾಥಾ ಮತ್ತು ಶ್ಲೋಕ ಮಾತ್ರಗಳನ್ನುಳ್ಳದ್ದೆಂದು ತಿಳಿಸಿದೆ. ಇದಲ್ಲದೆ ಕಾವ್ಯಗಳಲ್ಲಿ ವೈದರ್ಭವೆಂಬುದು ಬೇರೊಂದಿಯೆಂದೂ ಅದೇ ಅತ್ಯುತ್ತಮವೆಂದೂ ಹೇಳುವ ಪಂಡಿತರ ಅಭಿಪ್ರಾಯವನ್ನು ಉಲ್ಲೇಖಿಸಿ ಅದಕ್ಕೂ ಗೌಡೀಯವೆಂಬುದಕ್ಕೂ ಇರುವ ವ್ಯತ್ಯಾಸವನ್ನು 'ಗತಾನುಗತಿಕ ನ್ಯಾಯಾನ್ನಾನಾಖ್ಯೇಯಮಮೇಧಸಾಂ' (ಬುದ್ಧಿಯಿಲ್ಲದವರು ಒಬ್ಬರಂತೊಬ್ಬರು ಇಟ್ಟಿರುವ ಬೇರೆ ಬೇರೆ ಹೆಸರುಗಳು ಮಾತ್ರ)- ಎಂದು ಅಲ್ಲಗಳೆದಿದ್ದಾನೆ. ಪ್ರಸಂಗವಶಾತ್ ಈ ಮಾತೂ ಕಾವ್ಯ ವಿಭಾಗದ ಮತ್ತೊಂದು ಪ್ರಕಾರಕ್ಕೆ ಅನ್ವಯಿಸಿ ಹೇಳಿದಂತಿದೆ.

 ದಂಡಿ ತನ್ನ ಕಾವ್ಯಾದರ್ಶದಲ್ಲಿ, ಕಾವ್ಯ ಗದ್ಯ, ಪದ್ಯ, ಮಿಶ್ರವೆಂಬ ಮೂರೇ ವಿಧಗಳನ್ನುಳ್ಳದ್ದೆಂದು ಹೇಳಿದ್ದಾನೆ. ಇವನಲ್ಲಿ ಮಿಶ್ರವೆಂಬುದು ಹೊಸದು. ಇದರಲ್ಲಿ ನಾಟಕಾದಿಗಳೂ ಚಂಪೂಕಾವ್ಯವೂ ಸೇರುತ್ತವೆ. ವೃತ್ತ ಮತ್ತು ಜಾತಿ ಎಂದು ಪದ್ಯ ಎರಡು ವಿಧ. ಮುಕ್ತಕ, ಕುಲಕ, ಕೋಶ ಸಂಘಾತ ಎಂಬ ಹೊಸ ಪ್ರಭೇದಗಳು ಸರ್ಗಬಂಧದ ಅಂಶಗಳೆಂದು ಪರಿಗಣಿಸಲ್ಪಟ್ಟಿವೆ. ಗದ್ಯಕೃತಿ ಕಥೆ, ಆಖ್ಯಾಯಿಕೆ ಎಂಬ ಎರಡು ಭೇದಗಳನ್ನುಳ್ಳದ್ದೆಂಬ (ಭಾಮಹನ) ಅಭಿಪ್ರಾಯವನ್ನು ಅಲ್ಲಗಳೆದು ಇವೆರಡೂ ಒಂದೆ ಕಾವ್ಯದ ಎರಡು ಹೆಸರುಗಳೆಂದು ದಂಡಿ ಅಭಿಪ್ರಾಯ ಪಡುತ್ತಾನೆ. ಭಾಷೆಯ ದೃಷ್ಟಿಯಿಂದ ವಿಂಗಡಿಸುವಾಗಲೂ ಈತ ಭಾಮಹನಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಮಿಶ್ರವೆಂಬ ನಾಲ್ಕನೆಯ ವಿಧವನ್ನು ಅಂಗೀಕರಿಸುತ್ತಾನೆ. ಪ್ರಾಕೃತ, ತತ್ಸಮ, ತದ್ಭವ, ದೇಶೀ ಮೊದಲಾಗಿ ಅನೇಕ ವಿಧವೆಂದು ಹೇಳಿ ಅವುಗಳಲ್ಲಿ ಮಹಾರಾಷ್ಟ್ರೀ ಅತ್ಯುತ್ತಮವೆಂದೂ ಗೌಡೀ ಮತ್ತು ಲಾಟೀಗಳು ಇತರ ಪ್ರಕಾರಗಳೆಂದೂ ಹೇಳುತ್ತಾನೆ. ಸರ್ಗಬಂಧಾದಿಗಳು ಸಂಸ್ಕøತ ಕಾವ್ಯಗಳೆಂದೂ ಸ್ಕಂಧಕವೇ ಮೊದಲಾದವು ಪ್ರಾಕೃತ ಕಾವ್ಯಗಳೆಂದೂ ಓಸರ ಮೊದಲಾದವು ಅಪಭ್ರಂಶ ಕಾವ್ಯಗಳೆಂದೂ ಹೇಳಲ್ಪಟ್ಟಿವೆ. ದೃಶ್ಯ (ಲಾಸ್ಯ, ಛಲಿತ, ಶಂಪ ಮೊದಲಾದವು) ಹೊರತು ಮಿಕ್ಕವೆಲ್ಲ ಶ್ರವ್ಯ ಎಂಬ ವಿಭಾಗವನ್ನೂ ಉಲ್ಲೇಖಿಸಿರುತ್ತಾನೆ. ಮಾತಿನ (ಅರ್ಥಾತ್ ಕಾವ್ಯದ) ಮಾರ್ಗಗಳು ಅನೇಕ ಸೂಕ್ಷ್ಮ ವಿಧಗಳನ್ನುಳ್ಳವೆಂದು ಹೇಳಿ (ಭಾಮಹ ಅಲ್ಲಗಳೆದಿದ್ದ) ವೈದರ್ಭ ಮತ್ತು ಗೌಡೀಯ ಮಾರ್ಗಗಳಿಗೆ ಇರುವ ವ್ಯತ್ಯಾಸವನ್ನು ಗುಣಗಳ ಆಧಾರದ ಮೇಲೆ ಸ್ಪಷ್ಟಗೊಳಿಸುತ್ತಾನೆ.

 ಭಾಮಹನಂತೆ ವಾಮನನೂ ಗದ್ಯ, ಪದ್ಯ ಎಂಬ ದ್ವಿವಿಧ ವಿಭಾಗವನ್ನೇ ಅಂಗೀಕರಿಸಿರುತ್ತಾನೆ. ಗದ್ಯದ ವಿಚಾರದಲ್ಲಿ ಮಾತ್ರ ವೃತ್ತಗಂಧಿ , ಚೂರ್ಣ ಉತ್ಕಲಿಕಾಪ್ರಾಯ ಎಂಬ ಮೂರು ಹೊಸ ಅವಾಂತರ ಭೇದಗಳನ್ನು ಉದಾಹರಿಸಿದ್ದಾನೆ. ಪದ್ಯದ ಭಾಗಗಳನ್ನುಳ್ಳದ್ದು ವೃತ್ತಗಂಧಿ. ಸಮಾಸರಹಿತವಾದ ಲಲಿತ ಪದಗಳನ್ನುಳ್ಳದ್ದು ಚೂರ್ಣ. ಇದಕ್ಕೆ ವಿರುದ್ಧವಾಗಿ ದೀರ್ಘಸಮಾಸಗಳಿಂದಲೂ ಉದ್ಧಾತ ಪದಗಳಿಂದಲೂ ಕೂಡಿದ್ದು ಉತ್ಕಲಿಕಾಪ್ರಾಯ. ಕಾವ್ಯದಲ್ಲಿ ನಿಬದ್ಧ, ಅನಿಬದ್ಧ ಎಂದು ಎರಡು ವಿಧವೆಂದು ಮಾತ್ರ ಹೇಳಿ ಉಳಿದ ಭೇದಗಳು ಪ್ರಸಿದ್ಧವಾಗಿರುವ ಕಾರಣ ಲಕ್ಷಣವನ್ನು ಹೇಳಿಲ್ಲವೆನ್ನುತ್ತಾನೆ. ಸಂದರ್ಭ (ಪ್ರಬಂಧ)ಗಳಲ್ಲಿ ಹತ್ತು ರೂಪಗಳೇ ಅತ್ಯುತ್ತಮವೆಂದೂ ಅವುಗಳ ಮೂಲಕವೇ ಇತರ ಭೇದಗಳ ಕಲ್ಪನೆಯೆಂದೂ ಹೇಳಿ ಭರತನಲ್ಲಿ ಕಂಡುಬರುವ ರೂಪಕ ಪ್ರಧಾನ್ಯವನ್ನು ಪುಷ್ಟೀಕರಿಸುತ್ತಾನೆ. ಕಥೆ ಆಖ್ಯಾಯಿಕ ಮಹಾಕಾವ್ಯಾದಿಗಳ ಲಕ್ಷಣ ಹೃದಯಂಗಮವಲ್ಲವಾದುದರಿಂದ ಬಿಡಲಾಗಿದೆಯೆನ್ನುತ್ತಾನೆ.

 ರುದ್ರಟ ತನ್ನ ಕಾವ್ಯಲಂಕಾರದಲ್ಲಿ ಕಾವ್ಯಪ್ರಬಂಧಗಳಲ್ಲಿ (ಭಾಮಹನಿಂದ ಸೂಚಿತವಾಗಿರುವಂತೆ) ಉತ್ಪಾದ್ಯ ಮತ್ತು ಅನುತ್ಪಾದ್ಯ ಎಂಬ ವಿಭಾಗವನ್ನು ಪ್ರಧಾನವಾಗಿ ನಿರೂಪಿಸಿ ಇವೆರಡೂ ಮಹತ್ ಮತ್ತು ಲಘು ಎಂಬ ಮತ್ತೆರಡು ವಿಧಗಳನ್ನು ಹೊಂದಿವೆಯೆನ್ನುತ್ತಾನೆ. ಮಹಾಕಾವ್ಯ, ಕಥೆ, ಆಖ್ಯಾಯಿಕೆಗಳ ಲಕ್ಷಣವನ್ನು ವಿಸ್ತಾರವಾಗಿ ನಿರೂಪಿಸಿ, ಕ್ಷುದ್ರ ಕಾವ್ಯಗಳ ಪೈಕಿ ಖಂಡಕಥೆ, ಪ್ರಶಸ್ತಿ, ಕುಲಕ, ನಾಟಕಾದಿಗಳ ವಿಷಯವನ್ನು ಸಂಗ್ರಹವಾಗಿ ನಿರೂಪಿಸುತ್ತಾನೆ. ಪ್ರಶಸ್ತಿ ಎಂಬ ಕಾವ್ಯಪ್ರಭೇದ ಇವನಿಂದ ಹೊಸದಾಗಿ ಲಕ್ಷಿತವಾಗಿದೆ. ಇದಲ್ಲದೆ ರುದ್ರಟ ತನ್ನ ಗ್ರಂಥದ ಐದನೆಯ ಅಧ್ಯಾಯದಲ್ಲಿ ಚಿತ್ರಕಾವ್ಯದ ಭೇದಗಳಾದ ಚಕ್ರ, ಖಡ್ಗ, ಮುಸಲ, ಧನುಸ್ಸು, ಶಕ್ತಿ, ಶೂಲ ಮೊದಲಾದ ಅನೇಕ ಬಂಧಗಳನ್ನೂ ಕ್ರೀಡಾಮಾತ್ರೋಪಯೋಗವೆಂದು ಹೇಳಲಾಗಿರುವ ಮಾತ್ರಾಚ್ಯುತಕ, ಬಿಂದುಚ್ಯುತಕ, ಪ್ರಹೇಲಿಕಾ, ಕರ್ತೃಗೂಢ, ಕ್ರಿಯಾಗೂಢ, ಪ್ರಶ್ನೋತ್ತರ- ಮೊದಲಾದ ಪ್ರಭೇದಗಳನ್ನೂ ತಿಳಿಸುತ್ತಾನೆ. ಇವನ ಕಾಲದ ವೇಳೆಗೆ ಈ ಬಗೆಯ ಕಾವ್ಯ ವಿಶೇಷವಾಗಿ ಹುಟ್ಟಿದ್ದಿರಬೇಕೆಂದು ತೋರುತ್ತದೆ. ಭಾರವಿ, ಮಾಘ ಮೊದಲಾದ ಪಂಡಿತ ಕವಿಗಳು ಇವುಗಳ ಮೂಲಕ ಪಾಂಡಿತ್ಯ ಪ್ರದರ್ಶನ ಮಾಡಿರುವುದು ಗಮನಾರ್ಹ.

 ಅಗ್ನಿಪುರಾಣದ ಕಾವ್ಯಾದಿಲಕ್ಷಣ ಪ್ರಕರಣದಲ್ಲಿ ಕಾವ್ಯ ದಂಡಿಯ ಮತಾನುಸಾರವೇ ವಿಂಗಡಿಸಲ್ಪಟ್ಟಿದೆಯಾದರೂ ಗದ್ಯಕಾವ್ಯದ ವಿಷಯದಲ್ಲಿ ಕಥಾ, ಆಖ್ಯಾಯಿಕಾ, ಖಂಡಕಥಾ, ಪರಿಕಥಾ, ಕಥಾನಿಕಾ ಎಂಬ ಐದು ( ಹೊಸ ಪ್ರಭೇದಗಳೂ ಸೇರಿ) ಭೇದಗಳನ್ನು ಹೇಳಲಾಗಿದೆ. ಪದ್ಯ ವೃತ್ತ, ಜಾತಿ ಎಂದು ಎರಡು ವಿಧವಾದರೂ ಮಹಾಕಾವ್ಯ, ಕಲಾಪ, ಪರ್ಯಾಯ ಬಂಧ, ವಿಶೇಷಕ, ಕುಲಕ ಮುಕ್ತಕ, ಕೋಷ-ಇವು ಪದ್ಯ ಕುಟುಂಬಕ್ಕೆ ಸೇರಿದುವೆಂದು ಹೇಳಲಾಗಿದೆ. ವಪುಃ, ಪ್ರಕೀರ್ಣ ಎಂದು ಮಿಶ್ರ ಎರಡುವಿಧ. ಪ್ರಕೀರ್ಣದಲ್ಲಿ ಅಭಿನೇಯವಾದ ನಾಟಕಾದಿಗಳು ಬರುತ್ತವೆ.

 ಕ್ರಿ.ಶ. ಒಂಬತ್ತನೆಯ ಶತಮಾನದಲ್ಲಿ ನೂತನವಾದ ಧ್ವನಿತತ್ತ್ವವನ್ನು ಪ್ರತಿಪಾದಿಸಿದ ಆನಂದವರ್ಧನನೂ ತನ್ನ ಧ್ವನ್ಯಾಲೋಕದ ಮೂರನೆಯ ಉದ್ಯೋತದಲ್ಲಿ ಲಘುಪದ್ಯಕಾವ್ಯದ ಮುಕ್ತಕ, ಸಂದಾನಿತಕ, ವಿಶೇಷಕ, ಕಲಾಪಕ ಮತ್ತು ಕುಲಕ ಎಂಬ ಭೇದಗಳನ್ನೂ ಗದ್ಯವಿಭಾಗದಲ್ಲಿ ಪರ್ಯಾಯಬಂಧ, ಪರಿಕಥಾ, ಖಂಡಕಥಾ ಮತ್ತು ಸಕಲ ಕಥಾ ಎಂಬ ಅವಾಂತರ ಭೇದಗಳನ್ನೂ ಹೆಸರಿಸಿ ಈಗಾಗಲೇ ಪರಿಚಿತವಾಗಿರುವ ಸರ್ಗಬಂಧ. ಅಭಿನೇಯಾರ್ಥ, ಆಖ್ಯಾಯಿಕಾ, ಕಥಾ ಎಂಬ ಭೇದಗಳನ್ನೂ ಉದಾಹರಿಸಿರುತ್ತಾನೆ. ಇದಲ್ಲದೆ ಇವನ ಧ್ವನಿತತ್ತ್ವದ ದೃಷ್ಟಿಯಿಂದ ಕಾವ್ಯಗಳ ವಿಭಾಗಕ್ರಮದಲ್ಲಿ ಮತ್ತೊಂದು ಗಮನಾರ್ಹವಾದ ಬದಲಾವಣೆಯಾಯಿತು. ಧ್ವನಿ ಶಬ್ದ ಧ್ವನ್ಯತೇ ಅಸ್ಮಿನ್ ಎಂಬ ವ್ಯುತ್ಪತ್ತಿಗೆ ಅನುಗುಣವಾಗಿ ಪ್ರಬಂಧ ವಿಶೇಷಕ್ಕೂ ನಿರ್ದೇಶಕವಾಯಿತು. ಧ್ವನಿಸಿದ್ಧಾಂತದ ನೂತನ ಮೌಲ್ಯ ಮಾಪನದಿಂದ ಕಾವ್ಯವನ್ನು ಧ್ವನಿಕಾವ್ಯ (ವಾಚ್ಯರ್ಥಕ್ಕಿಂತ ವ್ಯಂಗ್ಯಾರ್ಥ ಪ್ರಧಾನವಾಗಿರವುದು), ಗುಣೀಭೂತವ್ಯಂಗ್ಯ (ವ್ಯಂಗ್ಯ ವಾಚ್ಯದೊಡನೆ ಸಮ ಅಥವಾ ಕಡಿಮೆಯ ಪ್ರಾಧಾನ್ಯ ಹೊಂದಿರುವುದು), ಮತ್ತು ಚಿತ್ರಕಾವ್ಯ ಎಂದು ಮೂರು ವಿಧವಾಗಿ ವಿಂಗಡಿಸಲಾಯಿತು. ಧ್ವನಿಕಾವ್ಯ ಅತ್ಯುತ್ತಮವೆಂದೂ ಗುಣೀಭೂತವ್ಯಂಗ್ಯ ಕಾವ್ಯ ಮಧ್ಯಮವೆಂದೂ ಶಬ್ದಚಿತ್ರ. ಅರ್ಥಚಿತ್ರ ಎಂಬ ಭೇದಗಳನ್ನುಳ್ಳ ಚಿತ್ರಕಾವ್ಯ ಅಧಮವೆಂದೂ ನಿರ್ಣಯಿಸಲ್ಪಟ್ಟಿತು. ಈ ವಿಭಾಗಕ್ರಮವನ್ನು ಈಚಿನ ವಿಮರ್ಶಕನಾದ ಪಂಡಿತರಾಜ ಜಗನ್ನಾಥ ಪರಿಷ್ಕರಿಸಿ ಧ್ವನಿಕಾವ್ಯವನ್ನು ಉತ್ತಮೋತ್ತಮವೆಂದು ಕರೆದಿರುತ್ತಾನೆ. ವ್ಯಂಗ್ಯ ಅಪ್ರಧಾನವಾದರೂ ಎಲ್ಲಿ ಚಮತ್ಕಾರ ಕಾರಣವೊ ಅಂಥ ಕಾವ್ಯ ಉತ್ತಮ. (ಇದು ಕಾವ್ಯಪ್ರಕಾಶಕಾರ ಮಮ್ಮಟನ ಮತಾನುಸಾರ ಮಧ್ಯಮ). ವಾಚ್ಯ ಚಮತ್ಕಾರ ಪ್ರಧಾನವಾಗಿದ್ದರೂ ಬೇರೆಡೆಯಲ್ಲಿ ಅಪ್ರಧಾನವಾಗಿಯಾದರೂ ವ್ಯಂಗ್ಯ ಚಮತ್ಕಾರವಿದ್ದರೆ ಅದು ಮಧ್ಯಮ ಕಾವ್ಯ. (ಇದು ಮಮ್ಮಟನ ಗುಣೀಭೂತವ್ಯಂಗ್ಯಕ್ಕೂ ಅರ್ಥಚಿತ್ರಕ್ಕೂ ಮಧ್ಯಸ್ಥವಾದ ವಿಭಾಗ). ಎಲ್ಲಿ ಅರ್ಥಚಮತ್ಕಾರದಿಂದ ಉಪಸ್ಕøತವಾದ ಶಬ್ದಚಮತ್ಕಾರವಿರುವುದೋ ಅಂಥ ಕಾವ್ಯ ಅಧಮ. ಕೇವಲ ಶಬ್ದಚಿತ್ರವನ್ನು ಜಗನ್ನಾಥ ಅಧಮಾಧಮವೆಂದು ಹೇಳಿ ಅದನ್ನೂ ಕೆಲವರು ಕಾವ್ಯವೆಂದೊಪ್ಪಿದರೂ ತನಗೆ ಅದು ಅನಭಿಮತವೆಂದು ನಿರಾಕರಿಸುತ್ತಾನೆ. ಇದಲ್ಲದೆ ಅವಿವಕ್ಷಿತವಾಚ್ಯ, ವಿವಕ್ಷಿತಾನ್ಯಪರವಾಚ್ಯ ಮೊದಲಾದ ಧ್ವನಿಯ ಅನೇಕ (ಒಟ್ಟು 5355) ಭೇದಗಳಿಗೆ ತಕ್ಕಂತೆ ಕಾವ್ಯಪ್ರಭೇದಗಳೂ ಸಾಧ್ಯವೆಂದು ಊಹಿಸಬಹುದಾದರೂ ಆ ಭೇದಗಳೆಲ್ಲ ವ್ಯವಹಾರದಲ್ಲಿಲ್ಲ. ಕಾವ್ಯಪ್ರಬಂಧಗಳಿಗೂ ಅನ್ವಯಿಸುವಂತೆ ಕೆಲವು ಮುಖ್ಯ ಧ್ವನಿಭೇದಗಳು ಮಾತ್ರ ಧ್ವನಿಮತಾನುಯಾಯಿಗಳಿಂದ ಅಂಗೀಕರಿಸಲ್ಪಟ್ಟಿವೆ.

 ರಾಜಶೇಖರನ ಕಾವ್ಯವೀಮಾಂಸೆಯಲ್ಲಿ (ಕ್ರಿ.ಶ. 880-920) ಈ ವಿಧವಾದ ಕಾವ್ಯವಿಭಾಗವಾವುದೂ ಕಂಡುಬರುವುದಿಲ್ಲವಾದರೂ ಮೂರನೆಯ ಅಧ್ಯಾಯದಲ್ಲಿ ವರ್ಣಿತವಾಗಿರುವ ಕಾವ್ಯಪುರುಷನ ಪ್ರವಾಸ ವೃತ್ತಾಂತವೂ ಐದನೆಯ ಅಧ್ಯಾಯದಲ್ಲಿ ನಿರೂಪಿತವಾಗಿರುವ ಕವಿ ಪ್ರಭೇದಗಳೂ ತದನುಗುಣವಾದ ಕಾವ್ಯಭೇದಗಳನ್ನು ಸೂಚಿಸುವಂತಿವೆ. ಆದರೆ ಇವು ಸಹ ವ್ಯವಹಾರದಲ್ಲಿಲ್ಲ.

 ರಸಧ್ವನಿ ಸಿದ್ಧಾಂತದ ಪರಿಷ್ಕರಣದಲ್ಲಿ ತೊಡಗಿದ ಈಚಿನ ಆಲಂಕಾರಿಕರೂ ಪ್ರಾಚೀನ ಕಾವ್ಯವಿಭಾಗ ಕ್ರಮಗಳನ್ನು ವಿಮರ್ಶಿಸಿ ಲಕ್ಷಣೋದಾಹರಣಿಗಳ ಮೂಲಕ ಸ್ಪಷ್ಟಪಡಿಸಲು ಪ್ರಯತ್ನಿಸಿರುತ್ತಾರೆ.

 ಕ್ರಿ.ಶ. ಹನ್ನೊಂದನೆಯ ಶತಮಾನದ ಆದಿಭಾಗಕ್ಕೆ ಸೇರಿದ ಭೋಜಮಹಾರಾಜ ತನ್ನ ವಿಸ್ತಾರವಾದ ಶೃಂಗಾರಪ್ರಕಾಶದ ಹನ್ನೊಂದನೆಯ ಅಧ್ಯಾಯದಲ್ಲಿ ಇಪ್ಪತ್ತ ನಾಲ್ಕು ಬಗೆಯ ಪ್ರೇಕ್ಷ್ಯಪ್ರಬಂಧಗಳನ್ನೂ ಅದೇ ರೀತಿ ಇಪ್ಪತ್ತನಾಲ್ಕು ಬಗೆಯ ಶ್ರವ್ಯಪ್ರಬಂಧಗಳನ್ನೂ ಹೆಸರಿಸಿ ಲಕ್ಷಣೋದಾಹರಣೆಗಳಿಂದ ವಿವರಿಸುತ್ತಾನೆ. ಪ್ರೇಕ್ಷ್ಯ ಪ್ರಬಂಧಗಳ ಪೈಕಿ ಹನ್ನೆರಡು ವಾಕ್ಯಾರ್ಥಾಭಿನಯದ ಭೇದಗಳೆಂದೂ ಉಳಿದ ಹನ್ನೆರಡು ಪದಾರ್ಥಾಭಿನಯದ ಭೇದಗಳೆಂದೂ ಹೇಳಲಾಗಿದೆ. ಶ್ರವ್ಯ ಕಾವ್ಯಗಳ ಪೈಕಿ ಉಪಾಖ್ಯಾನಮ್, ನಿದರ್ಶನಮ್, ಪ್ರವಲ್ಹಿಕಾ, ಮಂಥುಲ್ಲಿಕಾ (ಮತಲ್ಲಿಕಾ). ಮಣಿಕುಲ್ಯಾ, ಉಪಕಥಾ, ಬೃಹತ್ಕಥಾ, ಪರ್ವಬಂಧ, ಕಾಂಡಬಂಧ, ಆಶ್ವಾಸಕಬಂಧ, ಸಂಧಿಬಂಧ, ಸಂಹಿತಾ, ಸಾಹಿತ್ಯಪ್ರಕಾಶ ಮೊದಲಾದ ಭೇದಗಳನ್ನು ಭೋಜ ಹೊಸದಾಗಿ ಹೇಳುತ್ತಾನಲ್ಲದೆ ಹಿಂದಿನವರು ಹೇಳಿದ ಓಸರ, ಅಪಭ್ರಂಶಕಾವ್ಯ, ಅನಿಬದ್ಧ ಮುಕ್ತಕ, ಸಂದಾನಿತಕ ಮೊದಲಾದ ಭೇದಗಳನ್ನೂ ಎಂಟನೆಯ ಅಧ್ಯಾಯದಲ್ಲಿ ಹೇಳುತ್ತಾನಲ್ಲದೆ ಈ ವಿಧವಾದ ಕ್ಷುದ್ರ ಅಥವಾ ಖಂಡಕಾವ್ಯಗಳ ಪ್ರಭೇದಗಳ ಸಂಖ್ಯೆ ಈಚಿನ ಅಲಂಕಾರ ಗ್ರಂಥಗಳಲ್ಲಿ ಇನ್ನೂ ಹೆಚ್ಚಿದೆ.

 ಹೇಮಚಂದ್ರ (1089-1173) ತನ್ನ ಕಾವ್ಯಾನುಶಾಸನವೆಂಬ ಉದ್ಗ್ರಂಥದಲ್ಲಿ ಕಾವ್ಯವನ್ನು ಪ್ರೇಕ್ಷ್ಯ ಮತ್ತು ಶ್ರವ್ಯ ಎಂದು ಎರಡಾಗಿ ವಿಂಗಡಿಸಿ ಪ್ರೇಕ್ಷ್ಯವನ್ನು ಪಾಠ್ಯ ಮತ್ತು ಗೇಯ (ಹಾಡಲು ಅರ್ಹವಾದದ್ದು) ಎಂದು ವಿಭಾಗಿಸಿದ್ದಾನೆ. ಭೋಜ ಹೇಳಿರುವ ಹನ್ನೆರಡು ವಾಕ್ಯಾರ್ಥಾಭಿನಯದ ಭೇದಗಳನ್ನು ಹೇಮಚಂದ್ರ ಪಾಠ್ಯದ ಭೇದಗಳನ್ನಾಗಿ ಗಮನಿಸಿರುತ್ತಾನೆ. ಆದರೆ ಗೇಯ ವಿಭಾಗದಲ್ಲಿ ಡೋಂಭಿಕ, ಶಿಂಗಕ, ರಾಮಾಕ್ರೀಡ, ಮೊದಲಾದ ಹೊಸ ಭೇದಗಳನ್ನೂ ಹೇಳಿರುತ್ತಾನೆ. ಶ್ರವ್ಯ ಕಾವ್ಯಗಳ ಪ್ರಸಿದ್ಧ ಭೇದಗಳು ಹಿಂದಿನಂತೆಯೇ ಇದ್ದರೂ ಲಕ್ಷಣಾದಿಗಳಲ್ಲಿ ಹೆಚ್ಚು ಪರಿಷ್ಕಾರವಿಲ್ಲಿ ಕಂಡುಬರುತ್ತದೆ.

 ಈಚಿನ ಜೈನ ಆಲಂಕಾರಿಕರು ಹೇಳಿರುವ ಹಲವಾರು ಕಾವ್ಯ ಪ್ರಭೇದಗಳಲ್ಲಿ ಕೆಲವು ಗಮನಾರ್ಹವಾಗಿವೆ. ಉದ್ಯೋತನ ಸೂರಿ ತನ್ನ ಕುವಲಯ ಮಾಲಾ ಗ್ರಂಥದಲ್ಲಿ ಕಥೆಯನ್ನು ಪುರುಷಾರ್ಥಗಳಿಗನುಗುಣವಾಗಿ ಧರ್ಮಕಥಾ, ಅರ್ಥಕಥಾ, ಕಾಮಕಥಾ ಮತ್ತು ಸಂಕೀರ್ಣಕಥಾ ಎಂದು ನಾಲ್ಕು ವಿಧವಾಗಿ ವಿಂಗಡಿಸಿದ್ದಾನೆ. ಇದಲ್ಲದೆ ಉಲ್ಲಾಪಕಥಾ, ಪರಿಹಾಸಕಥಾ ವರಕಥಾ, ವಿಕಥಾ ಎಂಬ ಪ್ರಭೇದಗಳೂ ಉದಾಹರಿಸಲ್ಪಟ್ಟಿವೆ.

 13-14ನೆಯ ಶತಮಾನದಲ್ಲಿದ್ದ ವಿದ್ಯಾನಾಥ ತನ್ನ ಪ್ರತಾಪರುದ್ರ ಯಶೋಭೂಷಣವೆಂಬ ಗ್ರಂಥದಲ್ಲಿ ಉದಾಹರಣ, ಚಕ್ರವಾಲಕ, ಭೋಗಾವಲೀ, ಬಿರುದಾವಲೀ ಮತ್ತು ತಾರಾವಲೀ ಎಂಬ ಕ್ಷುದ್ರ ಕಾವ್ಯಪ್ರಭೇದಗಳನ್ನು ಹೊಸದಾಗಿ ಹೇಳಿರುತ್ತಾನಲ್ಲದೆ ಧ್ವನಿ ಮತಾನುಸಾರವಾದ ವಿಭಾಗವನ್ನೂ ಉಲ್ಲೇಖಿಸಿರುತ್ತಾನೆ. ಸಾಹಿತ್ಯ ಕಲ್ಪದ್ರುಮವೆಂಬ ಈಚಿನ ಗ್ರಂಥದಲ್ಲಿ ನಾಟ್ಯಘೋಷಣಾ, ರಂಗಘೋಷಣಾ, ಜಯಘೋಷಣಾ ಮತ್ತು ತ್ಯಾಗಘೋಷಣಾ ಎಂಬ ಪ್ರಶಸ್ತಿ ಕಾವ್ಯದ ಪ್ರಭೇದಗಳು ಹೇಳಲ್ಪಟ್ಟಿವೆ. ಇಂಥ ಕೆಲವು ಪ್ರಶಸ್ತಿ ಗ್ರಂಥಗಳನ್ನೂ ಉಪಚಂಪೂ ಕಾವ್ಯಗಳೆಂದೂ ವಿಂಗಡಿಸಲಾಗಿದೆ.

 ವಿಶ್ವನಾಥ (14ನೆಯ ಶತಮಾನ) ತನ್ನ ಸಾಹಿತ್ಯದರ್ಪಣವೆಂಬ ಉದ್ಧಾಮ ಗ್ರಂಥದ ನಾಲ್ಕನೆಯ ಪರಿಚ್ಛೇದದಲ್ಲಿ ಧ್ವನಿಮತಾನುಸಾರವಾದ ಧ್ವನಿಯ ಐವತ್ತೊಂದು ಮುಖ್ಯ ಭೇದಗಳನ್ನೂ ಆರನೆಯ ಪರಿಚ್ಛೇದದಲ್ಲಿ ರೂಪಕ, ಉಪರೂಪಕ ಮತ್ತು ಶ್ರವ್ಯ ಕಾವ್ಯಗಳ ಮುಖ್ಯ ಪ್ರಭೇದಗಳನ್ನೂ ಲಕ್ಷಣೋದಾಹರಣೆಗಳ ಸಹಿತ ಪರಿಷ್ಕರಿಸಿ, ಉಲ್ಲೇಖಿಸಿ, ಉಳಿದ ಭೇದಗಳು ಉದ್ದೇಶಮಾತ್ರ ಪ್ರಸಿದ್ಧವಾಗಿರುವುದರಿಂದ ಬಿಡಲ್ಪಟ್ಟಿವೆಯೆನ್ನುತ್ತಾನೆ. ಈತ ಬಿರುದ ಮತ್ತು ಕರಂಭಕವೆಂಬ ಚಂಪೂ ಕಾವ್ಯ ಪ್ರಭೇದಗಳನ್ನು ಹೊಸದಾಗಿ ಲಕ್ಷಿಸಿರುತ್ತಾನೆ. ಚಂಪೂಕಾವ್ಯ ರಾಜಸ್ತುತಿಯಾದರೆ ಬಿರುದವೆಂದೂ ವಿವಿಧ ಭಾಷೆಗಳಲ್ಲಿ ರಚಿತವಾಗಿದ್ದರೆ ಕರಂಭಕವೆಂದೂ ಕರೆಯಲ್ಪಟ್ಟಿದೆ.

 ಕಾವ್ಯದ ಮುಖ್ಯ ವಿಭಾಗಗಳನ್ನು ನಿರೂಪಿಸುವುದರಲ್ಲಿ ಎರಡು ಮಾರ್ಗಗಳು ಕಂಡುಬರುತ್ತವೆ. ದಂಡಿಯಂತೆ ಕಾವ್ಯವನ್ನು ಗದ್ಯ, ಪದ್ಯ, ಮಿಶ್ರ ಎಂದು ಮೂರು ಬಗೆಯನ್ನಾಗಿ ವಿಂಗಡಿಸಿ ಮಿಶ್ರಭಾಗದಲ್ಲಿ ನಾಟಕ ಮತ್ತು ಚಂಪೂಕಾವ್ಯಗಳಿಗೆ ಅಂತರ್ಭಾವವನ್ನು ಹೇಳುವುದು ಒಂದು ವಿಧಾನವಾದರೆ, ಕಾವ್ಯಸಾಮಾನ್ಯವನ್ನು ದೃಶ್ಯ ಮತ್ತು ಶ್ರವ್ಯ ಎಂದು ಎರಡಾಗಿ ವಿಂಗಡಿಸಿ ಶ್ರವ್ಯವನ್ನು ಗದ್ಯ ಪದ್ಯ ಮಿಶ್ರ ಎಂದು ಮೂರು ಭಾಗವಾಗಿ ವಿಂಗಡಿಸುವುದು ಮತ್ತೊಂದು ಕ್ರಮವಾಗಿ ನಡೆದುಬಂದಿದೆ. ಈ ಅಂಶದಲ್ಲಿ, ಮಾತ್ರ ಆಲಂಕಾರಿಕರಲ್ಲಿ ಒಮ್ಮತ ಕಂಡುಬರುವುದಿಲ್ಲ. ಉಳಿದ ಪ್ರಕಾರಗಳನ್ನು ಮೇಲಿನಂತೆ ಚಿತ್ರಿಸಬಹುದು. ಲಕ್ಷಣೋದಾಹರಣೆಗಳ ವಿಷಯದಲ್ಲಿ ಕಾಲಕಾಲಕ್ಕೆ ಆಗಿರುವ ವ್ಯತ್ಯಾಸಗಳನ್ನು ಆಯಾ ಆಕರ ಗ್ರಂಥಗಳಿಂದ ತಿಳಿಯಬಹುದಾಗಿದೆ. (ನೋಡಿ- ಮಹಾಕಾವ್ಯ)

 

(ಎಸ್.ವಿ.ಎಸ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ